ಸಂಜೆ ವೇಳೆ ಸವಿಯಲು ಗಿರ್ಮಿಟ್ ಮಾಡಿ ಕೊಡಿ. ಸಿಕ್ಕಾಪಟ್ಟೆ ಸಿಂಪಲ್!

ನೀವು ಸಂಜೆ ವೇಳೆ ಸೈಡ್ ಡಿಶ್ ಸೇವಿಸುವ ಅಭ್ಯಾಸ ಇದ್ದರೆ ಖಂಡಿತ ನೀವು ಚುರುಮುರಿ ಮಾಡಿ ಸವಿದಿರುತ್ತೀರಿ. ಉತ್ತರ ಕರ್ನಾಟಕ ಭಾಗದಲ್ಲಂತು ಚುರುಮುರಿ ಅಂದ್ರೆ ಜನರಿಗೆ ಪಂಚಪ್ರಾಣ. ಮಸಾಲೆ ಬರಿತ ಚುರುಮುರಿ ಅಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬಾಯಿ ಚಪ್ಪರಿಸಿ ಸವಿಯುತ್ತಾರೆ. ಇದನ್ನ ಬೇರೆ ಬೇರೆ ಹೆಸರಿಂದ ಕರೆಯುತ್ತಾರೆ. ಗಿರ್ಮಿಟ್, ಮಸಾಲ ಮಂಡಕ್ಕಿ, ಚುರುಮುರಿ ಹೀಗೆ ನಾನಾ ಹೆಸರಿಂದ ಕರೆಯುತ್ತಾರೆ. 

ಹಾಗಾದ್ರೆ ನಾವಿಂದು ಈ ಚುರುಮುರಿ ಮಾಡೋದು ಹೇಗೆ? ಗಿರ್ಮಿಟ್ ಮಾಡಲು ಬೇಕಾಗುವ ವಸ್ತುಗಳು ಯಾವುದು? ಸುಲಭವಾಗಿ ಮಾಡೋದು ಹೇಗೆ ಎಂಬುದನ್ನು ನಾವಿಂದು ನೋಡೋಣ. 

ಗಿರ್ಮಿಟ್ ಮಾಡಲು ಬೇಕಾಗುವ ಪದಾರ್ಥಗಳು: 

ಮಂಡಕ್ಕಿ- 1 ಬೌಲ್ 

ಸಾಸಿವೆ 1/2 ಟೀಸ್ಪೂನ್ 

ಜೀರಿಗೆ - 1/2 ಟೀಸ್ಪೂನ್ 

ಬೆಳ್ಳುಳ್ಳಿ-8 

ಈರುಳ್ಳಿ (ಕತ್ತರಿಸಿದ) - 1 

ಇಂಗು - 1/4 ಟೀಸ್ಪೂನ್ 

ಹಸಿರು ಮೆಣಸಿನಕಾಯಿ - 5 

ಕರಿಬೇವಿನ ಎಲೆಗಳು - 2 

ಟೊಮೆಟೊ - 1 

ಹುರಿ ಗಡಲೆ ಪುಡಿ-2 ಟೀಸ್ಪೂನ್ 

ಅರಿಶಿನ ಪುಡಿ - 1/2 ಟೀಸ್ಪೂನ್ 

ಹುಣಸೆ ಹುಳಿ ಬೆಲ್ಲ - 1 tbs 

ಗರಂ ಮಸಾಲಾ ಪುಡಿ - 1/2 ಟೀಸ್ಪೂನ್ 

ಕೊತ್ತಂಬರಿ ಸೊಪ್ಪು - 2 ಚಮಚ 

ಅಡುಗೆ ಎಣ್ಣೆ ರುಚಿಗೆ ಉಪ್ಪು 

ಗಿರ್ಮಿಟ್ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಹಾಕಿಕೊಳ್ಳಿ ಎಣ್ಣೆ ಸ್ವಲ್ಪ ಜಾಸ್ತಿ ಹಾಕಿಕೊಳ್ಳಿ. ಬಳಿಕ ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಇಂಗು, ಹಸಿ ಮೆಣಸಿನಕಾಯಿ, ಕರಿಬೇವು ಹಾಕಿಕೊಂಡು ತಿರುಗಿಸಿಕೊಳ್ಳಿ. 30 ಸೆಕೆಂಡ್ಗಳ ಬಳಿಕ ಟೊಮೆಟೋ ಹಾಕಿಕೊಳ್ಳಿ. ಟೊಮೆಟೊ ಸಣ್ಣದಾಗಿ ಹೆಚ್ಚಿಕೊಳ್ಳಿ. ಬಳಿಕ ಇದಕ್ಕೆ ಅರಶಿಣ, ಹುಣಸೆ ಹುಳಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. 

ಇದೇ ವೇಳೆ ಬೆಲ್ಲ ಹಾಗೂ ಉಪ್ಪು ಸಹ ಹಾಕಿ, ಇದಕ್ಕೆ ಗರಂ ಮಸಾಲ ಹಾಕಿಕೊಂಡು 2 ನಿಮಿಷ ಕುದಿಸಿಕೊಳ್ಳಿ. ಇದಕ್ಕೆ ಹುರಿಕಡಲೆಯ ಹಿಟ್ಟು ಮಾಡಿಕೊಂಡು ಅದನ್ನು ಹಾಕಿಕೊಳ್ಳಿ. ಹೀಗೆ ಮಸಾಲೆ ಮಾಡಿಕೊಂಡು ಅದನ್ನು ಒಂದು ನಿಮಿಷ ಫ್ರೈ ಮಾಡಿ ಇಳಿಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಂಡು ನಿಮಗೆ ಎಷ್ಟು ಬೇಕೋ ಅಷ್ಟು ಗೊಜ್ಜು ಹಾಕಿಕೊಂಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಬೇಕಾದರೆ ನೀವು ಮಿಕ್ಸರ್ ಹಾಕಿಕೊಳ್ಳಬಹುದು. ಇದಕ್ಕೆ ಕೊನೆಯದಾಗಿ ಟೊಮೆಟೊ, ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿಕೊಂಡು ಹಾಕಿ ಮಿಕ್ಸ್ ಮಾಡಿ ಸವಿಯಲು ನೀಡಬಹುದು.

ಟೀ-ಕಾಫಿ ಜೊತೆಗೆ ಈ ಗಿರ್ಮಿಟ್ ಸವಿಯಲು ನೀಡಿದರೆ ಅದರ ರುಚಿ ದುಪ್ಪಟ್ಟಾಗುತ್ತದೆ. ಈ ಮಸಾಲೆ ಮಾಡಿಕೊಳ್ಳೋದು ಸಹ ತುಂಬಾನೆ ಸುಲಭ, ಯಾವಾಗ ಬೇಕಾದರು ಈ ಮಸಾಲೆ ಮಾಡಬಹುದು. ಈ ಗೊಜ್ಜನ್ನು ಮಾಡಿಟ್ಟುಕೊಂಡು ಫ್ರಿಡ್ಜ್‌ನಲ್ಲಿಟ್ಟರೆ ಎಷ್ಟು ಬಾರಿ ಬೇಕಾದರು ಚುರುಮುರಿ ಮಾಡಿ ಸವಿಯಬಹುದು. ಮಕ್ಕಳಿಗೆ ಸ್ವಲ್ಪ ಖಾರ ಕಡಿಮೆ ಬಳಸಿ ಮಾಡಿದರೆ ಇದರ ರುಚಿಗೆ ಅವರಿ ಮಾರುಹೋಗುತ್ತಾರೆ. ಮಳೆಗಾಲದ ಸಮಯದಲ್ಲಂತು ಗಿರ್ಮಿಟ್ ಸವಿಯೋದೆ ಒಂದು ಮಜಾ. ಹಾಗಾದ್ರೆ ಈ ಸುಲಭ ರೆಸಿಪಿಯನ್ನ ನೀವು ಮನೆಯಲ್ಲಿ ಮಾಡಿ ನೋಡಿ.